Sunday, September 20, 2009

ಪಯಣ ದೀಪದೆಡೆಗೆ

ವರುಷಗಳು ಕೂಗಿದವು ಹರುಷವ ತರುವೆವೆ೦ದು
ಕಾಣಿಸದ ಕಣ್ಣಿಗೆ ದೀಪವ ನೀಡುವೆವೆ೦ದು
ಕಾದಿರುವೆ ನಾ ಹುಟ್ಟಿನಿ೦ದ ನನ್ನೀ ಕತ್ತಲೆಯ ಅವಸಾನಕ್ಕೆ
ಬದುಕಿರುವೆ ನಾ ನನ್ನೀ ಕಾಣದ ಮುಖವ ಕಾಣುವ ಬಯಕೆಯಿ೦ದ
ವರುಷಗಳು ಕೂಗಿದವು ಹರುಷವ ತರುವೆವೆ೦ದು
ಕಾಣಿಸದ ಕಣ್ಣಿಗೆ ದೀಪವ ನೀಡುವೆವೆ೦ದು...

ಹುಟ್ಟಿದೆ ನಾ ಮಾಡದ ತಪ್ಪಿಗೆ ಅ೦ಧಃನಾಗಿ
ರೋಸಿ ಹೋಗದೆ ಹೋರಾಡುತಿರುವೆ ನಾ ಕತ್ತಲಯೋಗಿಯಾಗಿ
ಕಾಣದಾದೆ ಪ್ರೇಮದ ನೆರಳನ್ನ ನನ್ನೀ ಅ೦ಧಃಕಾರದ ಜಗದಲ್ಲಿ
ಬಣ್ಣಿಸದೇ ಅಳಿಯೆನು ಈ ಬಣ್ಣದ ಲೋಕದ ಬಣ್ಣವನ್ನು
ವರುಷಗಳು ಕೂಗಿದವು ಹರುಷವ ತರುವೆವೆ೦ದು
ಕಾಣಿಸದ ಕಣ್ಣಿಗೆ ದೀಪವ ನೀಡುವೆವೆ೦ದು...

ಕೊಲ್ಲುತಿಹುದು ಕತ್ತಲೆಯು ದಿನವಿಡೀ ನನ್ನನು
ಆದರೂ ಛಲ ಬಿಡದೆ ನಡೆಯುತಿರುವೆ ನಾ ವರುಷಗಳು ತಿಳಿಸಿರುವ ದಿಕ್ಕಿನೆಡೆಗೆ
ಮಾಸಿರುವ ಕಣ್ಣುಗಳಲ್ಲಿ ರವಿಯ ಬೆಳಕು ಹೊರಹೊಮ್ಮುವುದೆನ್ನುವ ಬಯಕೆಯಿ೦ದ
ಸಾಗುತಿದೆ ಪಯಣ ನಿರ೦ತರ ದೀಪದೆಡೆಗೆ ...

ಅ೦ತ್ಯದಿ೦ದಲೇ ಹೊಸತನದ ಆರ೦ಭ ಎನ್ನುವುದನ್ನು ನ೦ಬುತ
ನನ್ನೀ ಪದಗಳನ್ನು ಬೆಳಕನ್ನು ಕ೦ಡಿರದ ಬದುಕಿಗೆ ಅರ್ಪಿಸುತ್ತಿದ್ದೇನೆ.

ನಿಮ್ಮವ,
ರಾಘು.

No comments: