Thursday, July 15, 2010

ಮನೆ ಮಗು

ಪ್ರತಿ ಮನೆಯಲಿ ಒಂದು ಮಗುವಿರಬೇಕು
ಅದರ ತುಟಿಯಲಿ ಸ್ವಲ್ಪ ನಗುವಿರಬೇಕು
ದಿನವಿಡೀ
ಸಣ್ಣ ಮುದ್ದು ಹಟವ ಮಾಡುತಲಿರಬೇಕು
ಕೇಳಿದ ಕೂಡಲೇ ಸಿಹಿ ಮುತ್ತು, ಕಹಿ ಮುತ್ತು
ಎನ್ನುತ ಮುತ್ತನು ಕೊಡುತಿರಬೇಕು

ಪ್ರತಿ ಮನೆಯಲಿ ಒಂದು ಮಗುವಿರಬೇಕು
ಅದರ ತುಟಿಯಲಿ ಸ್ವಲ್ಪ ನಗುವಿರಬೇಕು..

ಯಜಮಾನನ ಹಾಗೆ ತಾ ಹೇಳುವ ಕೆಲಸವ
ಮನೆಮಂದಿ ಆಳಿನ ಹಾಗೆ ಮಾಡುತಲಿರಬೇಕು
ಸುಮ್ಮನೆ ಎಲ್ಲರೂ ಕೆಲಸವ ಮಾಡುತಲಿರಬೇಕು
ಖುಷಿಯಲಿ ಕಂದ ನೀಡುವ ಮುತ್ತಿಗೆ
ಮನೆಮಂದಿ ಎಲ್ಲರೂ ಕಾಯುತಲಿರಬೇಕು,
ಸುಮ್ಮನೆ ಎಲ್ಲರೂ ಕಾಯುತಲಿರಬೇಕು.

ಪ್ರತಿ ಮನೆಯಲಿ ಒಂದು ಮಗುವಿರಬೇಕು
ಅದರ ತುಟಿಯಲಿ ಸ್ವಲ್ಪ ನಗುವಿರಬೇಕು..

ಅಪ್ಪನ ಕೋಪ, ಅಮ್ಮನ ದಣಿವು
ಎಲ್ಲವ ನಗುವಲಿ ಮರೆಸುತಲಿರಬೇಕು
ಕಂದ ನೀ, ಎಲ್ಲರ ನೋವ
ನಗುವಲಿ ಮರೆಸುತಲಿರಬೇಕು
ನೀ ಹಗಲಿಗೆ ಸೂರ್ಯ, ಇರುಳಿಗೆ ಚಂದ್ರನಂತೆ
ಮನೆಯ ನೀ ಬೆಳಗುತಲಿರಬೇಕು

ಪ್ರತಿ ಮನೆಯಲಿ ಒಂದು ಮಗುವಿರಬೇಕು
ಅದರ ತುಟಿಯಲಿ ಸ್ವಲ್ಪ ನಗುವಿರಬೇಕು..

ನಿಮ್ಮವ,
ರಾಘು.