Saturday, December 12, 2009

ಹೀಗೇಕೆ... ಅನಿಸುತಿದೆ...

ಮಾತಿನ ಮಾತಿನಲಿ ಪ್ರೀತಿಯ ನೆನಪಿನಲಿ
ಕನಸಿನ ಬಯಲಲಿ ನೀ ನನ್ನ ಸನಿಹದಲಿ ಬಂದು ಹೇಳುತಿರುವೆ
ಒಂದೆರಡು ಮಾತು ಆಡು ನೀನೆಂದು
ನೂರೆಂಟು ಕನಸು ಕಾಣುವೆ ನಾನೆಂದುಹೇಳುತ ನಾಚುತ
ಮರೆಯಾದೆ ಪುಷ್ಪರಾಶಿಯ ನಡುವಲ್ಲಿಯೇ ಹೋದವಳ
ಹುಡುಕುತ ನಾ ಬಂದೆ, ಎಷ್ಟು ಹುಡುಕಿದರೂ ಇರಲಿಲ್ಲ ನೀ ಅಲ್ಲಿ
ಏಕೆ ಹೀಗೆ ಅಂದುಕೊಳ್ಳುವಸ್ಟರಲ್ಲಿ
ಬೆನ್ನಹಿಂದೇನೆ ನಸುನಗುತ ನಿಂತಿರುವೆ ಹೊವೊಂದು ಮುಡಿದು ನಸುನಗುತ ನಿಂತಿರುವೆ...

ಮಾತಿನ ಮಾತಿನಲಿ ಪ್ರೀತಿಯ ನೆನಪಿನಲಿ
ಕನಸಿನ ಬಯಲಲಿ ನೀ ನನ್ನ ಸನಿಹದಲಿ ಬಂದು ಹೇಳುತಿರುವೆ
ಒಂದೆರಡು ಮಾತು ಆಡು ನೀನೆಂದು
ನೂರೆಂಟು ಕನಸು ಕಾಣುವೆ ನಾನೆಂದು...

ಮನಸಿನ ಮನಸಲಿ ನೀ ನಿಂತು ಕೊಂಡಿರುವೆ
ಹೇಳಬೇಕು ಅಂದುಕೊಂಡಿರುವ ಎಲ್ಲಾ ವಿಷಯವನು ನೀ ತಿಳಿದುಕೊಂಡಿರುವೆ
ಬೀಳುವ ಕನಸನು ಲೆಕ್ಕ ಹಾಕಿ ನೀ ನೋಡಿದಮೇಲೆಂತೋ
ಕಿರುನಗೆಯ ಬೀರಿ ಕಣ್ಮುಂದೇನೆ ಚಲಿಸಿರುವೆ
ಅದ ಕಂಡಮೇಲೆಂತೋ ನನ್ನ ಕಣ್ಣು
ಈ ಹುಡುಗಿ ಚುಕ್ಕಿ ತಾರೆಗಳ ಮಡಿಲಲ್ಲಿಯು ಹೊಳೆಯುವಳು ಎಂದ್ ಹೇಳುತ
ಅವಳ ಹಿಂದೆ ಹಿಂದೇನೆ ಹೊರಟಿತ್ತು ಪಯಣವ ಬೆಳೆಸಿತ್ತು...

ಮಾತಿನ ಮಾತಿನಲಿ ಪ್ರೀತಿಯ ನೆನಪಿನಲಿ
ಕನಸಿನ ಬಯಲಲಿ ನೀ ನನ್ನ ಸನಿಹದಲಿ ಬಂದು ಹೇಳುತಿರುವೆ
ಒಂದೆರಡು ಮಾತು ಆಡು ನೀನೆಂದು
ನೂರೆಂಟು ಕನಸು ಕಾಣುವೆ ನಾನೆಂದು...

ಎದೆಯ ಎದೆಯಲಿ ನೀನೆ ತುಂಬಿಕೊಂಡಿರುವೆ
ಬಾಳ ಪುಟಗಳಲಿ ನಿನ್ನ ಹೆಸರು ಬರೆದುಕೊಂಡಿರುವೆ ಎಂದೆಹೇಳಬೇಕೆನ್ನುವಸ್ಟರಲಿ
ಕನಸೊಂದು ಕಣ್ಣ ಮುಂದೇನೆ ನನಸಾಗುವ ರೀತಿ ಕಂಡು ಬೆರಗಾಗಿ ಹೋದವ ನಾನು
ನಿನ್ನ ಮಿಡಿಯುವ ಪ್ರೀತಿಯ ಮಿಡಿತಕೆ ಮರುಳಾಗಿ ಹೋದೆ ನಾನು...

ಮಾತಿನ ಮಾತಿನಲಿ ಪ್ರೀತಿಯ ನೆನಪಿನಲಿ
ಕನಸಿನ ಬಯಲಲಿ ನೀ ನನ್ನ ಸನಿಹದಲಿ ಬಂದು ಹೇಳುತಿರುವೆ
ಒಂದೆರಡು ಮಾತು ಆಡು ನೀನೆಂದು
ನೂರೆಂಟು ಕನಸು ಕಾಣುವೆ ನಾನೆಂದು...

ನಿಮ್ಮವ,
ರಾಘು.

Tuesday, December 1, 2009

ಸ್ನೇಹ - ಒಂದು ಆತ್ಮ ಎರಡು ಮನಸ್ಸು

ಸ್ನೇಹ ಬೆತ್ತಲೆ
ಹೋಗಲಾಡಿಸುವುದು ಮನದ ಕತ್ತಲೆ
ಸ್ನೇಹ ಆಗಸದೆತ್ತರಕೆ ಏರಲು ನೆರವಾಗುವ ಮೋಡದ ಕೈ
ಜಾರಿ ಬಿದ್ದರೆ ಕಾಪಾಡುವ ಭೂತಾಯಿಯ ಅಂಗೈ

ಕಂಡ ಕನಸಿಗೆ ಸ್ನೇಹ ಕನ್ನಡಿ
ನೊಂದ ಮನಸಿಗೆ ಸ್ನೇಹ ಸಾಂತ್ವನದ ಮುನ್ನುಡಿ
ತಪ್ಪು ದಾರಿಗೆ ಸ್ನೇಹ ಸನ್ಮಾರ್ಗದ ದಾರಿದೀಪ
ಸಂತಸದ ಸಂಭ್ರಮಕೆ ಸ್ನೇಹ ಸಪ್ತಸಾಗರ

ಒಂದೇ ಆತ್ಮದ ಎರಡು ಮನಸ್ಸು ಸ್ನೇಹ
ಎರಡು ಮನಸ್ಸಿನ ಒಂದೇ ಕನಸು ಸ್ನೇಹ
ಬೇಕಂದಾಗ ಸಹಾಯ ಮಾಡುವ ಸ್ನೇಹ ಹಸ್ತ
ದಣಿವಾದಾಗ ನೆರಳು ನೀಡುವ ಸ್ನೇಹ ವ್ರಕ್ಷ

ಸ್ನೇಹ ಬೆತ್ತಲೆ
ಹೋಗಲಾಡಿಸುವುದು ಮನದ ಕತ್ತಲೆ...

ನಿಮ್ಮವ,
ರಾಘು.

Tuesday, November 17, 2009

ನನ್ನಲಿ ನೀನು

ಇರು ನೀನು ಇರು ನೀನು ನನ್ನಲಿ ನನ್ನಯ ಮನದಲಿ ಇಂದು ಮುಂದು ಎಂದೆಂದು
ಬಾ ನೀನು ನನ್ನಯ ಕನಸಿನಲಿ ಪ್ರತಿ ದಿನವೂ ಎಂದೆಂದೂ
ನೋವಿರಲಿ ನಲಿವಿರಲಿ ಇರು ನೀನು ಇರು ನೀನು ಸದಾ ನನ್ನಲ್ಲಿ ನೀನು
ಪ್ರೀತಿಯ ತಾ ನೀನು ಎದೆಯಲಿ ಬೆಳಗು ನೀನು
ಪ್ರಾಣಕೆ ಸೂರಾಗಿ ಇರು ನೀನು

ಇರು ನೀನು ಇರು ನೀನು ನನ್ನಲಿ ನನ್ನಯ ಮನದಲಿ ಇಂದು ಮುಂದು ಎಂದೆಂದು
ಬಾ ನೀನು ನನ್ನಯ ಕನಸಿನಲಿ ಪ್ರತಿ ದಿನವೂ ಎಂದೆಂದೂ
ಇರು ನೀನು ಇರು ನೀನು ಸದಾ ನನ್ನಲಿ ನೀನು

ಬಾವಕೆ ರೆಕ್ಕೆಯಾಗಿ ಇರು ನೀನು, ಸ್ನೇಹಕೆ ಹಸ್ತವಾಗಿ ಇರು ನೀನು
ಗುಡಿಯಲಿ ದೇವತೆಯಾಗಿ ಇರು ನೀನು
ಇರು ನೀನು ಇರು ನೀನು ಸದಾ ನನ್ನಲಿ ನೀನು
ಬಾಳಿಗೆ ದಾರಿಯಾಗಿ ಇರು ನೀನು, ದಾರಿಗೆ ಹೂವಾಗಿ ಇರು ನೀನು
ಹೂವಿಗೆ ದುಂಬಿಯಾಗಿ ಇರು ನೀನು
ಇರು ನೀನು ಇರು ನೀನು ಸದಾ ನನ್ನಲಿ ನೀನು

ಸಂಗೀತಕೆ ಸ್ವರವಾಗಿ ಇರು ನೀನು, ಮಾತಿಗೆ ಅರ್ಥವಾಗಿ ಇರು ನೀನು
ಕಾಡಲಿ ಜಿಂಕೆಯಾಗಿ ಇರು ನೀನು, ನಾಡಲಿ ಹರಿಯುವ ನದಿಯಾಗಿ ಇರು ನೀನು
ಇರು ನೀನು ಇರು ನೀನು ಸದಾ ನನ್ನಲಿ ನೀನು
ನಸುಕಿಗೆ ವಸಂತವಾಗಿ ಇರು ನೀನು, ಇರುಳಿಗೆ ಶಕ್ತಿಯಾಗಿ ಇರು ನೀನು
ಶಕ್ತಿಗೆ ಪ್ರೇರಣೆಯಾಗಿ ಇರು ನೀನು
ಇರು ನೀನು ಇರು ನೀನು ಸದಾ ನನ್ನಲಿ ನೀನು

ಇರು ನೀನು ಇರು ನೀನು ನನ್ನಲಿ ನನ್ನಯ ಮನದಲಿ ಇಂದು ಮುಂದು ಎಂದೆಂದು
ಬಾ ನೀನು ನನ್ನಯ ಕನಸಿನಲಿ ಪ್ರತಿ ದಿನವೂ ಎಂದೆಂದೂ
ಇರು ನೀನು ಇರು ನೀನು ಸದಾ ನನ್ನಲಿ ನೀನು

ನಿಮ್ಮವ,
ರಾಘು.

Sunday, November 8, 2009

ಮಾತಿನ ಅಲೆ

ನಿನ್ನ ಭೇಟಿ ಮಾಡಲು ಸಿಗುವುದು ನೆಪಗಳು ನೂರಾರು
ನಿನ್ನ ಜೊತೆ ಮಾತನಾಡಲು ಸಿಗುವುದು ಪದಗಳು ಸಾವಿರಾರು
ನೀನಿರುವೆ ಹತ್ತಾರು ಮೈಲುಗಳ ಆಚೇ
ಆದರೂ ನನ್ನದೇಗೆ ತಿಳಿಯುವುದು ನೀನಾಡುವ ಪ್ರತಿಯೊಂದು ಮಾತು

ನಿನ್ನ ಭೇಟಿ ಮಾಡಲು ಸಿಗುವುದು ನೆಪಗಳು ನೂರಾರು
ನಿನ್ನ ಜೊತೆ ಮಾತನಾಡಲು ಸಿಗುವುದು ಪದಗಳು ಸಾವಿರಾರು

ಅಲೆ ಅಲೆಯಾಗಿ ಬಂದ ಪ್ರೀತಿಯ ಮಾತು
ಕರೆದೊಯ್ಯುವುದು ಕ್ಷಣದಲ್ಲಿ ನೀನಿರುವ ಊರಿನೆಡೆಗೆ
ಜೊತೆ ಜೊತೆಯಾಗಿ ಬಂದ ನಗು ಆರಳುವುದು
ಕ್ಷಣದಲ್ಲಿ ಎನ್ನಯ ಮೊಗದಲ್ಲಿ
ಒಂದೂಂದಾಗಿ ನೆನಪಾಗುವ ನೀನಾಡುವ ಮಾತುಗಳು
ಪದೇ ಪದೇ ನಾ ಹೇಳುತಿರುವೆ ನಾನಾಡುವ ಸಾವಿರ ಪದಗಳಲ್ಲಿ

ನಿನ್ನ ಭೇಟಿ ಮಾಡಲು ಸಿಗುವುದು ನೆಪಗಳು ನೂರಾರು
ನಿನ್ನ ಜೊತೆ ಮಾತನಾಡಲು ಸಿಗುವುದು ಪದಗಳು ಸಾವಿರಾರು

ನನ್ನಯ ಕನಸುಗಳು ಆರಿತಿರುವ ವಿಷಯಗಳು ನಿನ್ನಯ ಮನದಲ್ಲಿ
ಹೆಜ್ಜೆಯ ಅಚ್ಚು ಹಾಕಿ ಅಲ್ಲೇ ಮನೆಯ ಮಾಡಿದೆ
ಎಸ್ಟೋ ದಿನಗಳ ನಂತರ ಸನಿಹದಿಂದ ಕೇಳಿದ ನಿನ್ನಯ
ಮಧುರ ಮಾತಿನ ಕನಸು ಹೆಚ್ಚಿಸಿದೆನ್ನೆಯ ಮುಖದ ಕಾಂತಿಯ
ಕನಸಿನ ಮಹೋತ್ಸವದಲ್ಲಿ ಮಾತಿನ ಕಲರವವು ಮೆಲ್ಲನೆ ಗುನುಗುತಿದೆ ಕಿವಿಯೊಳಗೆ...

ನಿನ್ನ ಭೇಟಿ ಮಾಡಲು ಸಿಗುವುದು ನೆಪಗಳು ನೂರಾರು
ನಿನ್ನ ಜೊತೆ ಮಾತನಾಡಲು ಸಿಗುವುದು ಪದಗಳು ಸಾವಿರಾರು

ನಿಮ್ಮವ,
ರಾಘು.

Sunday, November 1, 2009

ನೋಟಿನ ಮಹಿಮೆ

ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು
ಕಂತೆ ಕಂತೆ ನೋಟುಗಳ ಸಂತೆ ನಾವಾಗಿದ್ದಲ್ಲಿ ಕೂಗಿ ಕರೆದು ಹಾಕುವರು ನಮಗೆ ಮಣೆ
ಇಲ್ಲದಿದ್ದರೆ ಕೊಡಲಾರರು ನಮಗೆ ಬೆಲೆ, ಜೊತೆಗೆ ನೆಲೆ
ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು...

ಗಾಂಧಿ ತಾತನನ್ನೇ ಮರೆತಿರುವ ಜನ ಮರೆಯರು
ಪ್ರತಿ ನೋಟಿನಲ್ಲಿ ತಾತನ ಹುಡುಕಲು
ಏಕೆಂದರೆ ಎಲ್ಲರಿಗೂ ತಿಳಿದಿರುವುದು ನೋಟಿನ ಅಂಕೆ ಸಂಖ್ಯೆ ಏನೇ ಆಗಿರಲಿ
ತಾತನಿಲ್ಲದ ನೋಟಿಗೆ ಜೀವವಿಲ್ಲ ಎಂದು
ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು...

ಪ್ರತಿ ಕೆಲಸದ ಹಿಂದೆ ನೋಟಿರಬೇಕು
ಅದು ಆಗಬೇಕಾದರೆ ಎಷ್ಟು ನೋಟಿರಬೇಕೋ ಅಸ್ಟಿರಬೇಕು.
ನೋಟಿನ ಮುಂದೆ ಯಾರು ಲೆಕ್ಕವೇ ಅಲ್ಲ
ಅದರ ಹಿಂದೆ ಯಾರು ಇಲ್ಲದವರಿಲ್ಲ
ನೋಟು ಇದ್ದರೆ ಆಸೆಗೆ ಮಿತಿಯೇ ಇಲ್ಲ, ಕನಸಿಗೆ ಕೊನೆಯೇ ಇಲ್ಲ,
ಜೀವಕೆ ಬೆಲೆಯೇ ಇಲ್ಲ, ಎನ್ನುವರು ಎಲ್ಲಾ
ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು...

ನಿಮ್ಮವ,
ರಾಘು.

Tuesday, October 27, 2009

ಏಕಾಂಗಿ

ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ
ಕಂಬನಿ ಒರೆಸುವ ಕೈಗಳಿಲ್ಲ
ನೊಂದ ಭಾವಕೆ ಸಾಂತ್ವನ ಹೇಳುವವರಿಲ್ಲ
ಮನ ತುಂಬಿ ನಗುವ ಮನ ನನ್ನಲ್ಲಿ ಇಂದಿಲ್ಲ
ನಗಿಸುವ ಗುಣ ಯಾರಲ್ಲೂ ಇಲ್ಲ
ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ...

ಇರುಳಲಿ ಚಂದ್ರನ ಸುಳಿವಿಲ್ಲ
ಹಗಲೆಂಬ ಬದುಕಿನಲಿ ರವಿಯ ಬೆಳಕಿಲ್ಲ
ಕೂತಲ್ಲಿಂದ ಕದಲುವ ಮನಸ್ಸಿಲ್ಲ
ಕನಸುಗಳು ಮರಿ ಹಾಕುವ ಲಕ್ಷಣವಿಲ್ಲ
ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ...

ನೆನಪುಗಳನ್ನು ಇಂದು ಕಾಯುವವರಿಲ್ಲ
ಅವುಗಳದ್ದೇ ಕಾರುಬಾರು ಮನದೂರಲೆಲ್ಲಾ
ದೇವರಿಲ್ಲದ ಗುಡಿಯು, ನಿರ್ಜಿವ ಸೂರಿರುವ ಊರು
ಇಂದು ಈ ಏಕಾಂಗಿಯ ಊರಾಗಿದೆ
ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ...

ನಿಮ್ಮವ,
ರಾಘು.
('ಒಬ್ಬಂಟಿ'ಯಿಂದ 'ಏಕಾಂಗಿ'ಯಾಗಿ 'ಒಬ್ಬಂಟಿ'ಗಾಗಿ ಬರೆದ ಒಂದು ಸಣ್ಣ ಕವಿತೆ.)

ನೀ ನೆಡೆದ ದಾರಿಯಲ್ಲಿ

ಮೋಡದ ಬಾಗಿಲು ನೀ ತೆರೆದು
ನಮ್ಮಡೆಗೆ ನೆಡೆದು ಬಂದು
ಎಲ್ಲರ ಮುಖದಲ್ಲಿ ನಗುವಿನ ಮಲ್ಲಿಗೆಯ ಪರಿಮಳವ ಪಸರಿಸಿ
ಮತ್ಯಾಕೆ ಮೋಡಗಳ ಕಡೆಗೆ ಮುಖವ ಮಾಡಿ
ಪಯಣದ ಸೂಚನೆ ನೀಡುತಿರುವೇ

ಅಲ್ಲಿರುವುದು ಕೇವಲ ನಿನ್ನಯ ಮಂಜಿನ ಮನೆ
ಇಲ್ಲಿರುವುದು ನಿನ್ನಯ ಬಂಧು ಮಿತ್ರರಿಂದ ಕೂಡಿದ ಮಮತೆಯ ಅರಮನೆ
ಮೋಡಗಳು ನಿನ್ನನ್ನು ಕೈ ಬೀಸಿ ಕರೆದಿರಲು
ತಿರುಗಿ ಹೋಗುವ ಮನಸ್ಸು ನೀ ಮಾಡಿರಲು
ಬೇಡ ಎನ್ನು ಮನ ಕೇಳಿತು ನೀನ್ಯಾರು ಎಂದು

ನೆನಪೆಂಬ ಹಾದಿಯಲ್ಲಿ ನೀ ಮರೆಯಾದಾಗ
ನಿನ್ನದೊಂದು ಜೀವವು ನಿನಗಾಗಿ
ಚಂದಿರನ ಕೇಳುತ, ವಿಷಯವ ತಿಳಿಸು ಎಂದು ಪಿಡಿಸುತ
ಕಣ್ಣಾ ಮುಚ್ಚಾಲೆ ಆಟವ ಆಡುತಿದೆ...

ನಿಮ್ಮವ,
ರಾಘು.

Friday, October 23, 2009

ಸುಂದರ ಚಂದಿರ

ಮುದ್ದಿನ ಮಗುವೇ, ಮನೆ ನಲ್ಮೆಯ ಹೂವೇ
ನೀ ಕರೆದರೆ ಬರುವೆ, ನಿನ್ನ ಹಿಂದಲೇ ಇರುವೆ, ನಿನ್ನ ಜೊತೆಯಲೇ ನಡೆಯುವೆ ನಾನು
ನೀ ನಕ್ಕರೆ ನಗುವೇ, ನೀ ಅತ್ತರೆ ಅಳುವೇನು ನಾನು

ಮುದ್ದಿನ ಮಗುವೇ, ಮನೆ ನಲ್ಮೆಯ ಹೂವೇ
ನೀ ಕರೆದರೆ ಬರುವೆ, ನಿನ್ನ ಹಿಂದಲೇ ಇರುವೆ, ನಿನ್ನ ಜೊತೆಯಲೇ ನಡೆಯುವೆ ನಾನು...

ನಿನ್ನಯ ತೊದಲು ನುಡಿಯು ಕೇಳಲು ಸುಂದರ
ನೀ ಹಾಕುವ ಹೆಜ್ಜೆಯು ನೋಡಲು ಬಲು ಹಿತಕರ
ನೀ ಮಾಡುವ ಹಠದಲಿ ಕಾಣುವೆ ನಾ ಸುಂದರ ಚಂದಿರ
ಮುದ್ದಿನ ಮಗುವೇ, ಮನೆ ನಲ್ಮೆಯ ಹೂವು ನೀನು

ಮುದ್ದಿನ ಮಗುವೇ, ಮನೆ ನಲ್ಮೆಯ ಹೂವೇ
ನೀ ಕರೆದರೆ ಬರುವೆ, ನಿನ್ನ ಹಿಂದಲೇ ಇರುವೆ, ನಿನ್ನ ಜೊತೆಯಲೇ ನಡೆಯುವೆ ನಾನು...

ಸನ್ನೆಯ ಮಾತು, ಗೆಜ್ಜೆಯ ಸದ್ದು ಸೇರಿದೆ ಮುಗಿಲ ಮಡಿಲು
ಹೆಜ್ಜೆಯ ಗುರುತು, ನೀ ನಿಡುವ ಮುತ್ತು ತಂದಿದೆ ಹರುಷದ ಕಡಲು
ಕೊಟ್ಟನು ದೇವ ಮನೆಗೆ ವರವ ನಿನ್ನಯ ರೂಪದಲಿ
ನಗುವಿನ ಜ್ಯೋತಿ ನೀನು ಬೆಳಗು ಮನೆಯಲಿ ಸದಾ

ಮುದ್ದಿನ ಮಗುವೇ, ಮನೆ ನಲ್ಮೆಯ ಹೂವೇ
ನೀ ಕರೆದರೆ ಬರುವೆ, ನಿನ್ನ ಹಿಂದಲೇ ಇರುವೆ, ನಿನ್ನ ಜೊತೆಯಲೇ ನಡೆಯುವೆ ನಾನು...

ಎಲ್ಲಾ ಅಮ್ಮಂದಿರಿಗೆ,

ನಿಮ್ಮವ,
ರಾಘು.

Friday, October 16, 2009

ಸಮಾನತೆಯ ಬೆಳಕು

ಕತ್ತಲೆಯ ಮಾಯೆಯ ಅಳಸಲು ಬಂದ ಜ್ಞಾನದ ಬೆಳಕು
ಅಜ್ಞಾನದ ಆಗರವ ತೊಳೆಯಲು ಬಂದ ಸುಜ್ಞಾನದ ಬೆಳಕು
ಮನಸ್ಸಿನ ಮನೆಯ ಮೂಲೆ ಮೂಲೆಯ ಆವರಿಸಲು ಬಂದ ನೆಮ್ಮದಿಯ ಬೆಳಕು
ಹೊಸ ನವೋಲ್ಲಾಸವನ್ನು ಹಣತೆ ದೀಪದಲಿ ಹರಡಲು ಬಂದ ಬೆಳಕು ಈ ದೀಪಾವಳಿಯ ಬೆಳಕು
ಕತ್ತಲೆಯ ಮಾಯೆಯ ಅಳಸಲು ಬಂದ ಜ್ಞಾನದ ಬೆಳಕು
ಅಜ್ಞಾನದ ಆಗರವ ತೊಳೆಯಲು ಬಂದ ಸುಜ್ಞಾನದ ಬೆಳಕು...

ಶತ ಶತಮಾನದಿಂದ ನೆಡದು ಬಂದ ಬೆಳಕು, ಹೊಸ ಹೊಸ ಕನಸ ಹಚ್ಚಿದ ಬೆಳಕು
ಬಾನ ಬಯಲ ಸೀಮೆಯಲ್ಲಿ ಕುಣಿಯುವ ಬಣ್ಣಗಳ ಬೆಳಕು
ನೀನ್ಯಾರು, ನಾನ್ಯಾರು ಎನ್ನುವ ಬೇಧ ಭಾವ ಮಾಡದೇ ಚೆಲ್ಲುವ ಸಮತೆಯ ಬೆಳಕು
ಶತ ಶತಮಾನದಿಂದ ನೆಡದು ಬಂದ ಬೆಳಕು, ಹೊಸ ಹೊಸ ಕನಸ ಹಚ್ಚಿದ ಬೆಳಕು ಈ ದೀಪಾವಳಿಯ ಬೆಳಕು...

ಮನೆಮಂದಿಯೆಲ್ಲಾ ಒಂದಡೆಗೆ ಸೇರಿದಾಗ ನಗುವ ಹಂಚಲು ಬರುವ ಬೆಳಕು
ಊರೆಲ್ಲಾ ಬೆಳಗಲು ಮುಂದಾಗುವ ಆಕಾಶದೀಪದ ಬೆಳಕು
ಕಹಿಯ ಸುಟ್ಟು, ಕಷ್ಟಗಳ ಕಳೆದು, ಮನವ ಬೆಳಗುವ ಬೆಳಕು ಈ ದೀಪಾವಳಿಯ ಬೆಳಕು
ಕತ್ತಲೆಯ ಮಾಯೆಯ ಅಳಸಲು ಬಂದ ಜ್ಞಾನದ ಬೆಳಕು
ಅಜ್ಞಾನದ ಆಗರವ ತೊಳೆಯಲು ಬಂದ ಸುಜ್ಞಾನದ ಬೆಳಕು ಈ ದೀಪಾವಳಿಯ ಬೆಳಕು...

ನಿಮ್ಮವ,
ರಾಘು.

Thursday, October 15, 2009

ನಿನ್ನ ನಗು

ನಿನ್ನ ನಗುವಿಗಿ೦ತ ನಿನ್ನ ಕೋಪ ನಿನಗೆ ಚ೦ದ ಕಣೆ
ನಿನ್ನ ಮುದ್ದು ಮುಖಕ್ಕಿ೦ತ ನಿನ್ನ ನಿರ್ಮಲ ಮನಸ್ಸು ನಿನಗೆ ಸೊಬಗು ಕಣೆ
ಯಾವ ಹುಡುಗಿಯಲ್ಲೂ ಕಾಣದ ಸ್ವಲ್ಪ ಸಿಟ್ಟಿನ ಮನಸ್ಸಿನ ಮಿನಿಗುತಾರೆ ನೀನೆ ಕಣೆ
ನಿನ್ನ ನಗುವಿಗಿ೦ತ ನಿನ್ನ ಕೋಪ ನಿನಗೆ ಚ೦ದ ಕಣೆ
ನಿನ್ನ ಮುದ್ದು ಮುಖಕ್ಕಿ೦ತ ನಿನ್ನ ನಿರ್ಮಲ ಮನಸ್ಸು ನಿನಗೆ ಸೊಬಗು ಕಣೆ...

ನಿನ್ನ ರೂಪ ನೋಡಿ ನಾಚಿ ಮರೆಯಗುವನು ಚ೦ದ್ರ ಬಿಳಿ ಮೋಡದ ಒಳಗೆ
ನಿನ್ನ ಮಾತು ಕೇಳಲು ಬೇಡಿರುವನು ಮಳೆರಾಯ ಧರೆಯ ಆಸರೆಯನು
ಮಲ್ಲಿಗೆ ಹೂವುಗಳು ಹ೦ಬಲಿಸಿ ತುದಿಗಾಲಲಿ ನಿ೦ತಿರುವವು ನಿನ್ನ ಮುಡಿಗೆ ಒರಗಲು
ಯತ್ನಿಸಿರುವುದು ತ೦ಗಾಳಿ ಅಲೆ ಅಲೆಯಾಗಿ ತೇಲುತ್ತ ನಿನ್ನೆಡೆಗೆ ಬರಲು
ನಿನ್ನ ನಡಿಗೆಯ ನೋಡಿ ನಿ೦ತಲ್ಲಿಯೇ ಕನಸು ಕ೦ಡವು ಸಾಲು ಮರಗಳು ಸಾಲು ಸಾಲಾಗಿ
ನಿನ್ನ ನಗುವಿಗಿ೦ತ ನಿನ್ನ ಕೋಪ ನಿನಗೆ ಚ೦ದ ಕಣೆ
ನಿನ್ನ ಮುದ್ದು ಮುಖಕ್ಕಿ೦ತ ನಿನ್ನ ನಿರ್ಮಲ ಮನಸ್ಸು ನಿನಗೆ ಸೊಬಗು ಕಣೆ....

ನೀ ಅತ್ತರೆ ನಿನ್ನ ನಗಿಸಲು ಬರುವವು ತಾರೆಗಳು ಮೋಡಗಳ ತೂರಿ
ನೀ ನಕ್ಕರೆ ನಿನ್ನ ನಗುವಿನ ಚ೦ದ ನೋಡಲು ಬರುವವು ಮಳೆಯು ಹನಿ ಹನಿಯಾಗಿ
ಮಿ೦ಚಿ ಮರೆಯಾಗುವ ನಿನ್ನ ಕೋಪ
ಉಕ್ಕಿ ಹರಿದು ಕಡಲು ಸೇರುವ ನಿನ್ನ ನಗು ನನಗೆ ಬಲು ಇಷ್ಟ ಕಣೆ....

ನಿಮ್ಮವ,
ರಾಘು.

Wednesday, October 14, 2009

ಮನದ ತುಡಿತ

ಎದೆಯ ಒಡಲಿಗೆ ಇ೦ದು ಏನೋ ಆಗಿದೆ
ಮನದ ತುಡಿತ ಕಣ್ಣ ತುದಿ ಸೇರಿದೆ
ಒಲವಿನ ಮಳೆಯು ಮನದೂರನ್ನು ತೊಯ್ದುಕೊ೦ಡು ಹೋಗಿದೆ
ಮಾತಿಗಿ೦ತ ಮೌನವೇ ಇ೦ದು ಎಲ್ಲೆ ಮೀರಿದೆ
ಎದೆಯ ಒಡಲಿಗೆ ಇ೦ದು ಏನೋ ಆಗಿದೆ
ಮನದ ತುಡಿತ ಕಣ್ಣ ತುದಿ ಸೇರಿದೆ...

ಕೇಳದೇ ಬಿದ್ದಿರುವ ಕನಸಿನ ಒಳನೋಟವ ಹುಡುಕುವ ಪ್ರಯತ್ನ ಮನದಲ್ಲಿ ಸಾಗಿದೆ
ತಿಳಿಸದೇ ಬ೦ದಿರುವ ಪ್ರೀತಿಯ ಸಾಕುವ ಕೆಲಸ ಎದೆಯಲ್ಲಿ ನಡೆದಿದೆ
ಕಣ್ಣೀರನ್ನು ಹಿಡಿಯುವ ಭಾಗ್ಯ ಕೈಗಳಿಗೆ ದೊರೆತಿದೆ
ವರ್ಣಮಯ ಜಗತ್ತಿಗಿ೦ತ ಮೌನಮಯ ಜಗತ್ತು ನನಗೆ ಕೊ೦ಚ ಇಷ್ಟವಾಗಿದೆ...

ಕಣ್ಣಿಗೆ ಕಾಣಿಸದ ನೋವು ಎದೆಯಲ್ಲಿ ಅಡಗಿ ಕುಳಿತಿದೆ
ತಳಮಳದ ಉಸಿರಿಗೆ ಮೌನವೂ ಇ೦ದು ಜೀವ ತು೦ಬಿದೆ
ಪುಟ್ಟ ಪುಟ್ಟ ಕನಸುಗಳು ದಣಿವಿಲ್ಲದೆ ಬೆಟ್ಟದ ಹಾಗೆ ಬೆಳೆದು ನಿ೦ತು
ಇದು ಯುಗ ಯುಗದ ನ೦ಟು ಎ೦ದು ತಿಳಿ ಹೇಳಿದೆ
ಎದೆಯ ಒಡಲಿಗೆ ಇ೦ದು ಏನೋ ಆಗಿದೆ
ಮನದ ತುಡಿತ ಕಣ್ಣ ತುದಿ ಸೇರಿದೆ...

ನಿಮ್ಮವ,
ರಾಘು.

Sunday, September 20, 2009

ಪಯಣ ದೀಪದೆಡೆಗೆ

ವರುಷಗಳು ಕೂಗಿದವು ಹರುಷವ ತರುವೆವೆ೦ದು
ಕಾಣಿಸದ ಕಣ್ಣಿಗೆ ದೀಪವ ನೀಡುವೆವೆ೦ದು
ಕಾದಿರುವೆ ನಾ ಹುಟ್ಟಿನಿ೦ದ ನನ್ನೀ ಕತ್ತಲೆಯ ಅವಸಾನಕ್ಕೆ
ಬದುಕಿರುವೆ ನಾ ನನ್ನೀ ಕಾಣದ ಮುಖವ ಕಾಣುವ ಬಯಕೆಯಿ೦ದ
ವರುಷಗಳು ಕೂಗಿದವು ಹರುಷವ ತರುವೆವೆ೦ದು
ಕಾಣಿಸದ ಕಣ್ಣಿಗೆ ದೀಪವ ನೀಡುವೆವೆ೦ದು...

ಹುಟ್ಟಿದೆ ನಾ ಮಾಡದ ತಪ್ಪಿಗೆ ಅ೦ಧಃನಾಗಿ
ರೋಸಿ ಹೋಗದೆ ಹೋರಾಡುತಿರುವೆ ನಾ ಕತ್ತಲಯೋಗಿಯಾಗಿ
ಕಾಣದಾದೆ ಪ್ರೇಮದ ನೆರಳನ್ನ ನನ್ನೀ ಅ೦ಧಃಕಾರದ ಜಗದಲ್ಲಿ
ಬಣ್ಣಿಸದೇ ಅಳಿಯೆನು ಈ ಬಣ್ಣದ ಲೋಕದ ಬಣ್ಣವನ್ನು
ವರುಷಗಳು ಕೂಗಿದವು ಹರುಷವ ತರುವೆವೆ೦ದು
ಕಾಣಿಸದ ಕಣ್ಣಿಗೆ ದೀಪವ ನೀಡುವೆವೆ೦ದು...

ಕೊಲ್ಲುತಿಹುದು ಕತ್ತಲೆಯು ದಿನವಿಡೀ ನನ್ನನು
ಆದರೂ ಛಲ ಬಿಡದೆ ನಡೆಯುತಿರುವೆ ನಾ ವರುಷಗಳು ತಿಳಿಸಿರುವ ದಿಕ್ಕಿನೆಡೆಗೆ
ಮಾಸಿರುವ ಕಣ್ಣುಗಳಲ್ಲಿ ರವಿಯ ಬೆಳಕು ಹೊರಹೊಮ್ಮುವುದೆನ್ನುವ ಬಯಕೆಯಿ೦ದ
ಸಾಗುತಿದೆ ಪಯಣ ನಿರ೦ತರ ದೀಪದೆಡೆಗೆ ...

ಅ೦ತ್ಯದಿ೦ದಲೇ ಹೊಸತನದ ಆರ೦ಭ ಎನ್ನುವುದನ್ನು ನ೦ಬುತ
ನನ್ನೀ ಪದಗಳನ್ನು ಬೆಳಕನ್ನು ಕ೦ಡಿರದ ಬದುಕಿಗೆ ಅರ್ಪಿಸುತ್ತಿದ್ದೇನೆ.

ನಿಮ್ಮವ,
ರಾಘು.

ಆಸೆಯ ಮಹಲ್

ಹೃದಯಕ್ಕೆ ತಲುಪಿತಿಂದು ಮೌನದ ಮಾತೊಂದು
ಕಟ್ಟಿತು ನನ್ನಲ್ಲಿ ಕನಸಿನ ಮಹಲೊಂದು
ಸೋತಿತು ಜೀವವು ಆಸೆಯ ಚೆಲ್ಲಾಟಕೆ
ಅರಿವಾಯಿತು ನನಗಿಂದು ನನ್ನಲ್ಲಿಯೂ ಪ್ರೀತಿ ಇದೆಯೆಂದು
ಹೃದಯಕ್ಕೆ ತಲುಪಿತಿಂದು ಮೌನದ ಮಾತೊಂದು
ಕಟ್ಟಿತು ನನ್ನಲ್ಲಿ ಕನಸಿನ ಮಹಲೊಂದು....

ಬರಿದಾದ ಹೃದಯದಲ್ಲಿ ಒಲವಿನ ದೀಪ ಹಚ್ಚಿದಳು, ಕನಸಿನ ಬೀಜ ಬಿತ್ತಿದಳು
ಹಕ್ಕಿಯಂತೆ ಹಾರಡಿದೆ ನಾ ಮನದ ಮಹಲಿನಲ್ಲಿ
ಖುಷಿಯಿಂದ ತೇಲಾಡಿದೆನು ನಾ ಅಮಲಿನ ತುತ್ತಿನಲ್ಲಿ
ಮೈಮರೆತು ಬೆರಗಾಗಿ ನಿಂತೆ ನಾ ಆ ಪದಗಳಿಲ್ಲದ ಕರೆಯೋಲೆಗೆ...

ಕಳೆದೆನು ಸಮಯ ಬರೀ ಕನಸು ಕಟ್ಟುವಲ್ಲಿ
ಅರಿಯೆದಾದೆನು ಮನದೊಡತಿಯ ಮನದಾಳದ ಮೌನದ ಮಾತುಗಳನ್ನ
ಕಳೆದೆನು ಸಮಯ ಬರೀ ಕನಸು ಕಟ್ಟುವಲ್ಲಿ
ಅರಿಯೆದಾದೆನು ಮನದೊಡತಿಯ ಮನದಾಳದ ಮೌನದ ಮಾತುಗಳನ್ನ
ನನ್ನಂತರಾಳದ ಬಾವನೆಗಳು ನನ್ನ ಜೀವದ ಗೆಳತಿಗೆ ಬೇಡವಾಗಿ
ಉಳಿದಳಿದವು ನನ್ನಲ್ಲಿಯೇ ಮೌನವಾಗಿ...

ಕನಸಿನ ಮಹಲ್ ಕಟ್ಟುವ ಜೀವಗಳಿಗೆ ಸಮರ್ಪಿತ

ನಿಮ್ಮವ,
ರಾಘು.

Thursday, September 17, 2009

ಆ ದಿನಗಳ ಹುಡುಕಾಟದಲ್ಲಿ

ಬದುಕಿನ ದಾರಿಯಲ್ಲಿ ನೆನಪುಗಳ ಮಾತಿನಲ್ಲಿ
ಕಳೆಯುತಿದೆ ದಿನವು ಬರೀ ಹುಡುಕಾಟದಲ್ಲಿ
ಅಂದಿನ ಕನಸುಗಳು ಇಂದು ಬರೀ ನಿರ್ಜೀವ ನೆನಪುಗಳು
ಬರೀ ಆಸೆಯ ಚುಮ್ಮುವ ಮರಿಚೀಕೆಗಳು
ಬರೀ ಕೈಗೆಟುಕದ ಅಶಾಗೋಪುರಗಳು
ಬದುಕಿನ ದಾರಿಯಲ್ಲಿ ನೆನಪುಗಳ ಮಾತಿನಲ್ಲಿ
ಕಳೆಯುತಿದೆ ದಿನವು ಬರೀ ಹುಡುಕಾಟದಲ್ಲಿ...

ಮತ್ತದೆ ನೆನಪು ಮತ್ತದೆ ಹುಡುಕಾಟ
ಬೆಂಬಿಡದೆ ಹಿಂಬಾಲಿಸಿರುವುದು ನನ್ನ
ಅಂದಿರುವ ಸ್ನೇಹ, ಪ್ರೀತಿ ಇಂದುಳಿದಿಲ್ಲ ನನ್ನೆದೆಯಲಿ
ಅದು ಯಾರೂ ಕಾಣದ ಮರುಭೂಮಿ ನನ್ನಲ್ಲಿ
ದುಃಖದ ದಿನಗಳಲ್ಲಿ ಸುಖದ ಕನಸಿನಲ್ಲಿ
ಕಳೆಯುತಿದೆ ದಿನವು ಬರೀ ಹುಡುಕಾಟದಲ್ಲಿ...

ಮೌನದಿಂದಿದ್ದ ನಯನಗಳು ಇಂದು ಪಿಸುಗುಡುತ ಮುತ್ತಿಕ್ಕುತಿದೆ
ಕನಸುಗಳು ಮಣ್ಣ ಸೇರುತಿದೆ ಎಂಬ ಸೂಚನೆ ನೀಡುತ್ತಿದೆ
ಆ ದಿನಗಳು ಮತ್ತೆ ಬರಲಾರೆ ಎಂದು ಹಠವ ಮಾಡಿ ಹಿಂದುರಿಗಿದೆ
ಕಳೆದು ಹೋದ ದಿನಗಳು ಮತ್ತೆ ಬರವು ಎನ್ನುವ ಸತ್ಯ ತಿಳಿದು ಕೂಡ
ಮತ್ತದೆ ಹುಡುಕಾಟದಲ್ಲಿ ದಿನವ ಕಳೆಯುತಿರುವೆ...

ನನ್ನ ಈ ಮೌನದ ಪದಗಳು ನನ್ನ ಮನಸ್ಸಿಗೆ ಹತ್ತಿರವಾದವರಿಗೆಲ್ಲ ಆರ್ಪಿತ.

ನಿಮ್ಮವ,
ರಾಘು.