Thursday, July 15, 2010

ಮನೆ ಮಗು

ಪ್ರತಿ ಮನೆಯಲಿ ಒಂದು ಮಗುವಿರಬೇಕು
ಅದರ ತುಟಿಯಲಿ ಸ್ವಲ್ಪ ನಗುವಿರಬೇಕು
ದಿನವಿಡೀ
ಸಣ್ಣ ಮುದ್ದು ಹಟವ ಮಾಡುತಲಿರಬೇಕು
ಕೇಳಿದ ಕೂಡಲೇ ಸಿಹಿ ಮುತ್ತು, ಕಹಿ ಮುತ್ತು
ಎನ್ನುತ ಮುತ್ತನು ಕೊಡುತಿರಬೇಕು

ಪ್ರತಿ ಮನೆಯಲಿ ಒಂದು ಮಗುವಿರಬೇಕು
ಅದರ ತುಟಿಯಲಿ ಸ್ವಲ್ಪ ನಗುವಿರಬೇಕು..

ಯಜಮಾನನ ಹಾಗೆ ತಾ ಹೇಳುವ ಕೆಲಸವ
ಮನೆಮಂದಿ ಆಳಿನ ಹಾಗೆ ಮಾಡುತಲಿರಬೇಕು
ಸುಮ್ಮನೆ ಎಲ್ಲರೂ ಕೆಲಸವ ಮಾಡುತಲಿರಬೇಕು
ಖುಷಿಯಲಿ ಕಂದ ನೀಡುವ ಮುತ್ತಿಗೆ
ಮನೆಮಂದಿ ಎಲ್ಲರೂ ಕಾಯುತಲಿರಬೇಕು,
ಸುಮ್ಮನೆ ಎಲ್ಲರೂ ಕಾಯುತಲಿರಬೇಕು.

ಪ್ರತಿ ಮನೆಯಲಿ ಒಂದು ಮಗುವಿರಬೇಕು
ಅದರ ತುಟಿಯಲಿ ಸ್ವಲ್ಪ ನಗುವಿರಬೇಕು..

ಅಪ್ಪನ ಕೋಪ, ಅಮ್ಮನ ದಣಿವು
ಎಲ್ಲವ ನಗುವಲಿ ಮರೆಸುತಲಿರಬೇಕು
ಕಂದ ನೀ, ಎಲ್ಲರ ನೋವ
ನಗುವಲಿ ಮರೆಸುತಲಿರಬೇಕು
ನೀ ಹಗಲಿಗೆ ಸೂರ್ಯ, ಇರುಳಿಗೆ ಚಂದ್ರನಂತೆ
ಮನೆಯ ನೀ ಬೆಳಗುತಲಿರಬೇಕು

ಪ್ರತಿ ಮನೆಯಲಿ ಒಂದು ಮಗುವಿರಬೇಕು
ಅದರ ತುಟಿಯಲಿ ಸ್ವಲ್ಪ ನಗುವಿರಬೇಕು..

ನಿಮ್ಮವ,
ರಾಘು.

Sunday, June 27, 2010

ಏನಾಗಿದೆ.. ಈ ಮನಸಿಗೆ..

ಏನಾಗಿದೆ..ಈ ಹಾಡಿಗೆ, ಏನಾಗಿದೆ..ಈ ಮನಸಿಗೆ,
ಏನಾಗಿದೆ..ಈ ಜೀವಕೆ, ಏನಾಗಿದೆ..ಈ ಭಾವಕೆ,
ಮರೆಯದ ನೆನಪಿಗೆ..ಸೋತಿದೆ ಜೀವ,
ಅರಳದ ಕನಸಿಗೆ..ನೊಂದಿದೆ ಭಾವ.

ಏನಾಗಿದೆ..ಈ ಹಾಡಿಗೆ, ಏನಾಗಿದೆ..ಈ ಮನಸಿಗೆ,
ಏನಾಗಿದೆ..ಈ ಜೀವಕೆ, ಏನಾಗಿದೆ..ಈ ಭಾವಕೆ.

ಕಣ್ಣ ತುಂಬೆಲ್ಲವೂ ನಿನ್ನ ನೆನಪೇಕಿದೆ,
ಎದೆಯ ಒಳಗೆಲ್ಲವೂ ನಿನ್ನ ನಗು ಕೂತಿದೆ,
ಉಸಿರ ಕಣಕಣದಲ್ಲಿಯೂ ನಿನ್ನ ಹೂ ಬೆಳಕಿದೆ,
ಯಾಕೆ ಹೀಗೆ, ಇಂದು ಈ ಮನಸೇ ಹಾಗೇ..

ಏನಾಗಿದೆ..ಈ ಹಾಡಿಗೆ, ಏನಾಗಿದೆ..ಈ ಮನಸಿಗೆ,
ಏನಾಗಿದೆ..ಈ ಜೀವಕೆ, ಏನಾಗಿದೆ..ಈ ಭಾವಕೆ.

ಮಾತಿಗೆ ನಿನ್ನ ಜೊತೆಯೇ ಇಲ್ಲ, ಮೌನಕೆ ಜಗವೇ ಎಲ್ಲಾ,
ಕಳೆಯಲು ದಿನಗಳೇ ಇಲ್ಲ, ಆಸೆಗೆ ಜಾಗವೇ ಇಲ್ಲ,
ಯಾಕೆ ಹೀಗೆ, ಇಂದು ಈ ನೆನಪೇ ಹಾಗೇ..
ಹಗಲು..ಇಳಿಯುತ್ತಿದೆಯೋ,
ನೋವು..ನಗುವಾಗಿದೆಯೋ,
ಉಳಿಸೇ ಈ ಜೀವ, ಮರೆಸೇ ಈ ನೋವ..

ಏನಾಗಿದೆ..ಈ ಹಾಡಿಗೆ, ಏನಾಗಿದೆ..ಈ ಮನಸಿಗೆ,
ಏನಾಗಿದೆ..ಈ ಜೀವಕೆ, ಏನಾಗಿದೆ..ಈ ಭಾವಕೆ,
ಮರೆಯದ ನೆನಪಿಗೆ..ಸೋತಿದೆ ಜೀವ
ಅರಳದ ಕನಸಿಗೆ..ನೊಂದಿದೆ ಭಾವ.

ನಿಮ್ಮವ,
ರಾಘು.

Thursday, May 27, 2010

ನನಗೆ.. ನೀನೇ ಉಸಿರು..

ಮನದ ಭುವಿಗೆ ಬಿತ್ತು ಪ್ರೀತಿ ಮಂಜು
ಮುತ್ತಿನ ಮಂಜು ನನ್ನೆದೆ ಸೇರಿತು,
ನನ್ನೊಳಗೆ ನನಗೆ ಆಸರೆ ಆಯಿತು,
ಇದು ನನ್ನ ಕನಸೋ, ಅಲ್ಲ,
ಇದು ಯಾರ ನನಸೋ, ಅರಿಯೆ ನಾನು..

ನೆನದ ಹೃದಯ ಮೌನ ಬಿಟ್ಟು ಮಾತಾಡಿದೆ..
ನನಗೆ ನೀನೇ ಉಸಿರು, ನನಗೆ ನೀನೇ ಹಸಿರು
ನನಗೆ ನೀನೇ ಬೆಳಕು, ನನಗೆ ನೀನೇ..ಬದುಕು..

ಅಂದು ಗಿಡವಾಗಿದ್ದ ಕನಸು
ಇಂದು ನನ್ನೇ ಕಾಯುವ ಹೆಮ್ಮರವಾಗಿದೆ,
ದಣಿದ ಮನಕೆ ಒಲವ ನೆರಳಾಗಿದೆ,
ಕೈ ಚಾಚಿ ತನ್ನೆಡೆಗೆ ಬಾ ಎಂದಿದೆ,
ನೆನಪು ಕಡಲು, ನಗುವು ಹೊನಲು,
ಇದು ನನ್ನ ಕನಸೋ, ಅಲ್ಲ,
ಇದು ಯಾರ ನನಸೋ, ಅರಿಯೆ ನಾನು

ನೆನದ ಹೃದಯ ಮೌನ ಬಿಟ್ಟು ಮಾತಾಡಿದೆ..
ನನಗೆ ನೀನೆ ಉಸಿರು, ನನಗೆ ನೀನೆ ಹಸಿರು
ನನಗೆ ನೀನೆ ಬೆಳಕು, ನನಗೆ ನೀನೆ.. ಬದುಕು..

ಬಾನ ಕಣ್ಣ ತುಂಬಾ ನೆನಪ
ಕರಿಮೋಡ.. ಹರಿದಾಡಿದೆ..
ಕರಗಿ ಧರೆಗೆ ಬರುವ ಸುಳಿವು
ಮೊದಲ ಹನಿ ನೀಡಿದೆ..
ಸಮಯ ನನ್ನ ಕಾಯುತ್ತಿಲ್ಲ..ಮನಸು ನನ್ನ ಕೇಳುತ್ತಿಲ್ಲ..
ಇದು ನನ್ನ ಕನಸೋ, ಅಲ್ಲ,
ಇದು ಯಾರ ನನಸೋ, ಅರಿಯೆ ನಾನು

ನೆನದ ಹೃದಯ ಮೌನ ಬಿಟ್ಟು ಮಾತಾಡಿದೆ..
ನನಗೆ ನೀನೇ ಉಸಿರು, ನನಗೆ ನೀನೇ ಹಸಿರು
ನನಗೆ ನೀನೇ ಬೆಳಕು, ನನಗೆ ನೀನೇ..ಬದುಕು..

ನಿಮ್ಮವ,
ರಾಘು.

Saturday, March 27, 2010

ನಾಡಿದು.. ಕರುನಾಡಿದು..

ನಾಡಿದು.. ಕರುನಾಡಿದು..
ನಲ್ಮೆಯ.. ಒಲುಮೆಯ.. ಹೆಮ್ಮೆಯ.. ಬೀಡಿದು.. ಕರುನಾಡಿದು..
ಪ್ರೀತಿಗೆ.. ವಿಶ್ವಾಸಕೆ.. ಶಾಂತಿಗೆ.. ತವರೂರಿದು..
ನಾಡಿದು.. ಕರುನಾಡಿದು..
ನಲ್ಮೆಯ.. ಒಲುಮೆಯ.. ಹೆಮ್ಮೆಯ.. ಬೀಡಿದು.. ಕರುನಾಡಿದು.. ||

ಸಹ್ಯಾದ್ರಿಯ ಸೊಬಗಿದೆ..
ದುಮ್ಮುಕ್ಕಿ ಹರಿಯುವ ಕಾವೇರಿ ನದಿಯಿದೆ..
ಬೇಲೂರಿದೆ, ಹಳೇಬೀಡಿದೆ..
ಚಾಮುಂಡಿ ತಾಯಿಯ ಗುಡಿಯಿದೆ..
ನಾಡಿದು.. ಕರುನಾಡಿದು..
ನಲ್ಮೆಯ.. ಒಲುಮೆಯ.. ಹೆಮ್ಮೆಯ.. ಬೀಡಿದು.. ಕರುನಾಡಿದು.. ||

ಸೋಲಲಿ ಗೆಲುವಿನ ನಗೆ ಬೀರುವ ಹೃದಯವಂತರು..
ಜ್ಞಾನದ ಬೆಳಕನು ಎಲ್ಲಡೆ ಹಂಚುವ..
ಪ್ರತಿಫಲ ಬಯಸದೆ ಹಸ್ತವ ಚಾಚುವ
ಗುಣವಂತರು.. ಈ ನಾಡಿನ ಹಿರಿಮೆಯ ಗರಿಗಳು..
ನಾಡಿದು.. ಕರುನಾಡಿದು..
ನಲ್ಮೆಯ.. ಒಲುಮೆಯ..ಹೆಮ್ಮೆಯ.. ಬೀಡಿದು.. ಕರುನಾಡಿದು.. ||

ಬೆಳೆಯುವ ಸಿರಿಗೆ ನಿದರ್ಶನ ಇಲ್ಲಿನ ಮಕ್ಕಳು..
ನಾಳೆಯ ಭರವಸೆಯ ಕಣ್ಗಳು..
ಹತ್ತಾರು ಪ್ರಾಂತ್ಯದ ವಿವಿಧ ಕನ್ನಡ
ನಿತ್ಯಸತ್ಯದ ಸಂತೋಷದ ಅಲೆಗಳು..
ನಾಡಿದು.. ಕರುನಾಡಿದು..
ನಲ್ಮೆಯ.. ಒಲುಮೆಯ..ಹೆಮ್ಮೆಯ.. ಬೀಡಿದು..ಕರುನಾಡಿದು.. ||

ನಿಮ್ಮವ,
ರಾಘು.

Sunday, February 28, 2010

ನಗುವಿನ ಹೂಮಳೆ

ಅದೇನು ಅಂತ ಹೇಳಲಿ, ಅದ್ಯಾವ ರಾಗದಲ್ಲಿ ಹಾಡಲಿ
ಎದೆಯಲಿ ಒಡಲಲಿ ಪ್ರೀತಿ ಕಚಗುಳಿ
ಕನಸಲಿ ಮನಸಲಿ ನೀನು ನನ್ನಲಿ...

ಅದೆಂಥ ಮೋಡಿ ನಿನ್ನದು, ಮನಸು ನಿನ್ನ ಬಿಟ್ಟು ಕೂರದು
ಬಳಿಯಲಿ ನಗುವಲಿ ಒಲವ ಸುಳಿಯಲಿ
ಮಾತಲಿ ನೆನಪಲಿ ನೀನು ನನ್ನಲಿ

ಸೋನೆ ಮಳೆಯಲಿ ನೀನು ಜೊತೆಯಲಿ
ಬಯಸಿ ಬಂದ ಹೂಮಳೆ ಬಾನಿನಂಚಲಿ
ಮೆಲ್ಲ ಮುದ್ದು ನಸುನಗೆ ತುಟಿಯಂಚಲಿ

ಅದೇನು ಅಂತ ಹೇಳಲಿ, ಅದ್ಯಾವ ರಾಗದಲ್ಲಿ ಹಾಡಲಿ
ಎದೆಯಲಿ ಒಡಲಲಿ ಪ್ರೀತಿ ಕಚಗುಳಿ
ಕನಸಲಿ ಮನಸಲಿ ನೀನು ನನ್ನಲಿ...

ಅದೆಷ್ಟು ಬಾರಿ ಕೇಳಲಿ, ಅದ್ಯಾವ ಗುಡಿಯಲಿ ಬೇಡಲಿ
ಅಕ್ಕರೆ, ಮಮತೆಗೆ ಅವಳೇ ದೇವತೆ
ಬೆಳಗುವ ಬೆಳಕಿಗೇಕೆ ಬೇಕು ಹೋಲಿಕೆ

ಅದೆಲ್ಲಿ ಅಂತ ಹುಡುಕಲಿ, ಮತ್ತೆ ಮತ್ತೆ ನಿನ್ನಲಿ
ಖುಷಿಯಲಿ, ಸುಖದಲಿ, ಅನುರಾಗದಲೆಯಲಿ
ಸೋಲಲಿ ಗೆಲುವಲಿ ನೀನು ನನ್ನಲಿ

ಅದೇನು ಅಂತ ಹೇಳಲಿ, ಅದ್ಯಾವ ರಾಗದಲ್ಲಿ ಹಾಡಲಿ
ಎದೆಯಲಿ ಒಡಲಲಿ ಪ್ರೀತಿ ಕಚಗುಳಿ
ಕನಸಲಿ ಮನಸಲಿ ನೀನು ನನ್ನಲಿ...


ನಿಮ್ಮವ,
ರಾಘು.

Friday, January 15, 2010

ಬದುಕು... ಚಲಿಸುವ ಬಂಡಿ...

ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ
ಸೋಲಿಗೆ ಹೆದರಿ ಮುದುಡಿ ಕೂರದೆ
ನೆನ್ನೆಯ ನೆನಪನು ನೆನೆಯುತ ಸಮಯ ಕಳೆಯದೆ
ಕಾಲವ ಹಿಂದಿಕ್ಕಿ ಮುಂದೆ ಸಾಗುವ ಮನಸು ಮಾಡುವ
ಏನೇ ಅಗಲಿ, ಬಂದದ್ದೆಲ್ಲಾ ಬರಲಿ
ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ...

ಬದುಕು ನಮ್ಮದು ನೋವು ನಲಿವಿನ
ಹಳಿಯಲಿ ಚಲಿಸುವ ಬಂಡಿಯು
ಹಿಂದೆ ತಿರುಗಿ ಚಲಿಸುವುದುಂಟೇ
ಚಲಿಸುವ ಬಂಡಿಯು ಚಲಿಸುತಲಿರುವುದು
ಅವರಿವರು ಬರುವರೆಂದು ಕಾಯುವುದುಂಟೇ
ಏನೇ ಅಗಲಿ, ಬಂದದ್ದೆಲ್ಲಾ ಬರಲಿ
ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ...

ಗಾಳಿಪಟವು ಹಕ್ಕಿಯ ನೋಡಿ
ಗಗನದ ತುಂಬಾ ನಾ ಹಾರುವೆ ಎಂದರೂ
ಗಾಳಿಯು ಇಲ್ಲದೆ ಬಾನಲಿ ತೇಲುವುದುಂಟೇ
ಭರವಸೆ ಇಲ್ಲದ ಬಾಳು ನಗುತ ಸಾಗುವುದುಂಟೇ
ಏನೇ ಅಗಲಿ, ಬಂದದ್ದೆಲ್ಲಾ ಬರಲಿ
ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ...

ನಿಮ್ಮವ,
ರಾಘು.